ಕೋಬಾಲ್ ಟೈಟ್

ಕೋಬಾಲ್ಟ್ ಸಲ್ಫಾರ್ಸೆನೈಡನ್ನು ಒಳಗೊಂಡಿರುವ ಒಂದು ಖನಿಜ. ರಾಸಾಯನಿಕ ಸೂತ್ರ (ಅo,ಈe)ಂsS.  ಕೋಬಾಲ್ಟ್ ಲೋಹದ ಪ್ರಮುಖ ಅದುರುಗಳಲ್ಲಿ ಕೋಬಾಲ್‍ಟೈಟ್ ಒಂದು. ಬಿಳಿ, ಕೆಂಪು, ಊದಾ, ನೀಲಿ ಮುಂತಾದ ಬಣ್ಣಗಳುಳ್ಳ ಅಪಾರಕ ಖನಿಜವಿದು. ಕೋಬಾಲ್ಟ್ ಅದುರುಗಳನ್ನು ಅತಿ ಪುರಾತನ ಕಾಲದಿಂದ ವರ್ಣಕಾರಕಗಳಾಗಿ ಬಳಸುತ್ತಿದ್ದರೂ ಇದರ ಬಣ್ಣಕ್ಕೆ ಕಾರಣ ಮಾತ್ರ ಗೊತ್ತಿರಲಿಲ್ಲ. ಚೀನದಲ್ಲಿ ಮಿಂಗ್ ಸಂತತಿಯ ರಾಜರ ಕಾಲದಲ್ಲಿ ಪಿಂಗಾಣಿ ಪಾತ್ರೆಗಳಿಗೆ ನೀಲಿಬಣ್ಣ ಲೇಪಿಸಲು ಈ ಅದುರುಗಳನ್ನು ಉಪಯೋಗಿಸಲಾಗುತ್ತಿತ್ತು. 16ನೆಯ ಶತಮಾನದಲ್ಲಿ ಮಧ್ಯ ಯೂರೋಪಿನ ಹಾರ್ಟ್‍ಜ ಪರ್ವತಗಳಲ್ಲಿನ ಗಣಿಕೆಲಸಗಾರರು ಅಲ್ಲಿ ದೊರೆಯುವ ಅದುರುಗಳನ್ನು ತಾಮ್ರದ ಅದುರುಗಳೆಂದು ಭಾವಿಸಿ ಅವುಗಳಲ್ಲಿದ್ದ ತಾಮ್ರದ ಅಂಶವನ್ನು ಪ್ರತ್ಯೇಕಿಸಲು ಅವನ್ನು ಕುಲುಮೆಗಳಲ್ಲಿ ಕರಗಿಸಿದಾಗ ತಾಮ್ರ ಉತ್ಪತ್ತಿಯಾಗುವ ಬದಲು ಕೆಲವು ಹಾನಿಕಾರಕ ಅನಿಲಗಳು ಉದ್ಭವಿಸಿದುವು. ಇದರಿಂದಾಗಿ ಅವರು ಆ ಅದುರುಗಳನ್ನು ಕೋಬಾಲ್ಡ್ ಎಂದು ಕರೆದರು. ಜರ್ಮನ್ ಭಾಷೆಯಲ್ಲಿ ಕೋಬಾಲ್ಡ್ ಎಂಬ ಶಬ್ದಕ್ಕೆ ಹಾನಿಕಾರಕ ಭೂತ ಎಂದರ್ಥ. ಆ ಅದುರುಗಳನ್ನು ಕರಗಿಸಿ ಅವುಗಳಲ್ಲಿನ ಆರ್ಸೆನಿಕ್ ಮತ್ತು ಗಂಧಕದ ಅಂಶವನ್ನು ಪ್ರತ್ಯೇಕಿಸಿ ಉಳಿದ ಭಾಗವನ್ನು ಮರಳಿನ ಜೊತೆ ಸಮ್ಮಿಳಿಸಿದಾಗ ಒಂದು ಬಗೆಯ ನೀಲಿ ಬಣ್ಣದ ಗಾಜು ನಿರ್ಮಾಣವಾಯಿತು. ಅದುವರೆಗೂ ನೀಲಿ ಬಣ್ಣಕ್ಕೆ ಕಾರಣ ತಿಳಿಯದಿದ್ದು ಕೋಬಾಲ್ಟ್ ಲೋಹದ ಇರುವಿಕೆಯೇ ಈ ನೀಲಿಬಣ್ಣಕ್ಕೆ ಕಾರಣವೆಂದು ಸ್ವೀಡನಿನ ರಸಾಯನಶಾಸ್ತ್ರಜÐ ಬ್ರಾಂಟ್ ತೋರಿಸಿದ (1742).

ಕೋಬಾಲ್‍ಟೈಟ್ ಖನಿಜ ಸಾಮಾನ್ಯವಾಗಿ ಕಣರಚನೆಯ ರೂಪದಲ್ಲೊ (ಗ್ರ್ಯಾನ್ಯುಲಾರ್) ಅಥವಾ ದಟ್ಟರಾಶಿಗಳಲ್ಲೋ (ಕಾಂಪ್ಯಾಕ್ಟ್ ಮ್ಯಾಸಿವ್) ದೊರೆಯುತ್ತದೆ. ಸಂಪೂರ್ಣವಾಗಿ ರೂಪಗೊಂಡ ಕೋಬಾಲ್‍ಟೈಟ್ ಸ್ಫಟಿಕಗಳು ಅತಿ ವಿರಳ. ಇವು ಐಸೋಮೆಟ್ರಿಕ್ ವರ್ಗಕ್ಕೆ ಸೇರಿದ್ದು ಚತುರ್ಮುಖಿ, ಷಣ್ಮುಖಿ, ದ್ವಾದಶಮುಖಿಗಳ ರೂಪದಲ್ಲಿ ದೊರೆಯುತ್ತವೆ. ಈ ಸ್ಫಟಿಕಗಳು ಕೆಲವು ಸಲ ಪೈರೈಟ್ ಖನಿಜದ ಸ್ಫಟಿಕಗಳನ್ನು ಹೋಲುವುದುಂಟು.	

ಕೋಬಾಲ್‍ಟೈಟಿನ ಬಣ್ಣ ಬಿಳಿ, ಇದರ ಗಡಸುತನ ಪೈರೈಟ್ ಖನಿಜಕ್ಕಿಂತ ಕಡಿಮೆ. ಗಡಸುತನ 5.5 (ಮೋಹ್ಸ್ ಕಾಠಿನ್ಯಮಾನ). ಸಾಪೇಕ್ಷಸಾಂದ್ರತೆ 6.33. ಇದಕ್ಕೆ ನಿರ್ದುಷ್ಟವಾದ ಘನಸೀಳುಗಳಿವೆ (ಕ್ಯೂಬಿಕ್ ಕ್ಲೀವೆಜಸ್). ಕೋಬಾಲ್‍ಟೈಟ್ ಖನಿಜವನ್ನು ಒತ್ತಡಕ್ಕೀಡುಮಾಡಿ ಸುಲಭವಾಗಿ ಪುಡಿಮಾಡಬಹುದು. ಈ ಖನಿಜ ಸಾಮಾನ್ಯವಾಗಿ ಅಧಿಕ ಉಷ್ಣತೆಯ ಪರಿಸರದಲ್ಲಿ ರಚಿತವಾದ ರೂಪಾಂತರಿತ ಶಿಲೆಗಳಲ್ಲಿ ನೆಲೆಸಿರುತ್ತದೆ. ವಿರಳವಾಗಿ ಇದು ಇತರ ಕೋಬಾಲ್ಟ್ ಮತ್ತು ನಿಕಲ್ ಸಲ್ಫೈಡುಗಳ ಜೊತೆಯಲ್ಲಿ ಸಿರ (ವೀನ್ಸ್) ರೂಪದಲ್ಲಿ ದೊರಕುತ್ತದೆ.

ಬೆಳ್ಳಿಯಂತೆ ಹೊಳಪುಳ್ಳ ಕೋಬಾಲ್‍ಟೈಟ್ ಹರಳುಗಳು ಸ್ವೀಡನ್ನಿನ ಲುನಾಬರ್ಗ್, ನಾರ್ವೆಯ ಸ್ಕುಟರುಡ್ ಮುಂತಾದ ಸ್ಥಳಗಳಲ್ಲಿ ದೊರೆಯುತ್ತವೆ. ಸೊಗಸಾದ ಘನ ಮತ್ತು ಷಣ್ಮುಖಾಕೃತಿಯ ಹರಳುಗಳು ಆಂಟೇರಿಯೋದ ಕೋಬಾಲ್ಟ್ ಹತ್ತಿರವಿರುವ ಕೊಲಂಬಸ್ ಗಣಿಗಳಲ್ಲಿ ಸಿಕ್ಕುತ್ತವೆ. ಕೋಬಾಲ್‍ಟೈಟ್ ಖನಿಜ ಡೆನೈಟ್‍ನ ಜೊತೆ ಸೇರಿ ಭಾರತದ ರಾಜಸ್ಥಾನದ ಖೇತ್ರಿ ಪ್ರದೇಶದ ತಾಮ್ರದ ಗಣಿಗಳಲ್ಲಿ ಕಪ್ಪು ಬಳಪದ ಶಿಲೆಗಳಲ್ಲಿ ಮಿಶ್ರರೂಪದಲ್ಲಿ ದೊರೆಯುತ್ತದೆ. ಈ ಮಿಶ್ರಖನಿಜಕ್ಕೆ ಆ ಪ್ರದೇಶದಲ್ಲಿ ಸೇಹ್ತ ಎಂಬ ಹೆಸರಿದೆ. ಇದನ್ನು ಪುಡಿಮಾಡಿ, ಸಂಗ್ರಹಿಸಿ ಸುಮಾರು 1908ರ ವರೆಗೂ ಜೈಪುರದ ರತ್ನಾಭರಣ ವ್ಯಾಪಾರಿಗಳಿಗೆ ವಿಕ್ರಯಿಸಲಾಗುತ್ತಿತ್ತು ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಮೇಲೆ ನೀಲಿ ಎನಾಮಲ್ಲನ್ನು ತರಿಸಲು ಇದರ ಬಳಕೆ ಇತ್ತು.		 (ಜಿ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ